ಸಾವಿರ ಕ್ಯಾಂಡಲ್ಲಿನ ದೀಪ……

ಸಾವಿರ ಕ್ಯಾಂಡಲ್ಲಿನ ದೀಪ……

Sketch14619251ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರೆ, ’ಏನು ಜಲಜಕ್ಕಾ, ಬಹಳ ಖುಷಿಯಲ್ಲಿರುವಂತಿದೆ’ ಎಂದು ಕೇಳುವುದುಂಟು. ಆಗ ಅವಳು ನಗುತ್ತಾ, ’ಇದು ನಿಮ್ಮನ್ನು ನೋಡಿದ ನಂತರ ಆದ ಖುಷಿ’ ಎಂದು ಉತ್ತರಿಸುತ್ತಿದ್ದಳು. ಲಂಗ ಬ್ಲೌಸ್ ಹೊಲಿಸಲು ಬಂದ ಹೆಂಗಸರು ಅವಳು ನಗುವಿನಲ್ಲಿ ಪಾಲ್ಗೊಳ್ಳುತ್ತಿದ್ದರು. ಜಲಜ ಹಳೆಯದನ್ನೆಲ್ಲಾ ಒಮ್ಮೊಮ್ಮೆ ಯೋಚಿಸುವುದುಂಟು. ’ಕಳೆದ ಹೋದ ದಿನಗಳೇ ಒಳ್ಳೆಯ ದಿನಗಳು’ ಎಂದು ಅವಳು ಅದೆಷ್ಟೋ ಬಾರಿ ಅಂದುಕೊಂಡಿದ್ದಿದೆ. ಬದುಕಿನ ಆಕಾಶದಲ್ಲಿ ಕರಿಯ ಮೋಡಗಳೇ ಆವರಿಸಿಕೊಂಡಂತೆ ಅವಳಿಗೆ ಅನಿಸುತ್ತಿತ್ತು. ಹಾಗಂತ ಅವಳ ವೈವಾಹಿಕ ಜೀವನ ದುಃಖದಾಯಕವಾಗೇನೂ ಇರಲಿಲ್ಲ. ಅವಳ ಪತಿ ಮೋನಪ್ಪ ಅಡಿಕೆ ಕೊಯ್ಯುವ ಕೆಲಸ ಮಾಡುತ್ತಿದ್ದ. ಕೂಯ್ಲಿನ ಸಮಯದಲ್ಲಿ ಕೈತುಂಬ ಸಂಬಳ, ಮಳೆಗಾಲದಲ್ಲಿ ಮದ್ದು ಬಿಡುವ ಸಮಯ. ಅದರಲ್ಲೂ ಸಾಕಷ್ಟು ಗಳಿಕೆ. ತೆಂಗಿನ ಮರವನ್ನೇರುವುದಲ್ಲಿ ಮಂಗನನ್ನೂ ಮೀರಿಸಬಲ್ಲ ಮೋನಪ್ಪ ಆದರಿಂದಲೂ ಸಾಕಷ್ಟು ಗಳಿಸುತ್ತಿದ್ದ. ಕೆಲಸವೇ ಇಲ್ಲದ ದಿನಗಳಲ್ಲಿ ಯಾವುದಾದರೂ ತೆಂಗಿನ ಮರವೇರಿ ಒಂದಷ್ಟು ಕಾಯಿಕಿತ್ತು ಮಾರಾಟ ಮಾಡಿ ಬದುಕುವ ಕಲೆಯೂ ಅವನಿಗೆ ಸಿದ್ಧಿಸಿತ್ತು. ಮೋನಪ್ಪನಿಗೆ ಯಕ್ಷಗಾನದ ಹುಚ್ಚು. ಅವನ ಸಂಜೆಹೊತ್ತು ಸ್ವಲ್ಪ ಹಾಕಿಯೇ ಬರುತ್ತಿದ್ದ. ಜಲಜಾಳನ್ನು ನೋಡಿದೊಡನೆಯೇ, ಚಿಕ್ಕ ಪ್ರಾಯದ ಬಾಲೆ ಚದುರೆ, ನಿನ್ನಂಗವ ಒರೆಯಲೇನೇ’ ಎಂದು ರಸವತ್ತಾಗಿ ಹಾಡಿಬಿಡುತ್ತಿದ್ದ. ಆಗೆಲ್ಲಾ ಇವಳ ಕೆನ್ನೆಗಳು ಕೆಂಪೇರುತ್ತಿದ್ದವು.’ಹಗಲೇ ಶುರುವಾಯಿತು ಇವರದ್ದು’ಎಂದು ಹುಸಿಕೋಪ ನಟಿಸುತ್ತಿದ್ದಳು. ಅಂತಹ ಮೋನಪ್ಪ ಒಂದು ಕರಾಳ ದಿನ ತೆಂಗಿನ ಮರದಿಂದ ಬಿದ್ದು ವಿಪರೀತ ಏಟು ತಗುಲಿ ಒಂದು ವಾರ ಆಸ್ಪತ್ರೆಯಲ್ಲಿದ್ದು ಅವಳ ಹಣೆಯ ಬೊಟ್ಟನ್ನು ಅಳಿಸಿ ಕಾಣದ ಲೋಕಕ್ಕೆ ಹೊರಟು ಹೋಗಿದ್ದ. ಅವಳಲ್ಲಿದ್ದ ಉಳಿತಾಯ ಅವನ ಚಿಕಿತ್ಸೆಗೆಂದು ಮುಗಿದು ಹೋಗಿತ್ತು. ದಿನವಿಡೀ ಅತ್ತು ಅತ್ತು ಅವಳು ದುಃಖ ಮರೆಯಲು ಯತ್ನಿಸುತ್ತಿದ್ದಳು. ಸಂಜೆಯ ವೇಳೆಗೆ ಮೋನಪ್ಪ ಹೇಳುತ್ತಿದ್ದ. ’ಗಜಮುಖದವಗೆ, ಚಿಕ್ಕಪ್ರಾಯದ ಬಾಲೆ ಚದುರೆ’ ಮನೆಯಲ್ಲೆಲ್ಲಾ ಪ್ರತಿಧ್ವನಿಸುವಂತಾಗುತ್ತಿತ್ತು. ಒಂದೆಡೆ ಒಂಟಿತನ ಕಾಡಿದರೆ ಇನ್ನೊಂದೆಡೆ ಮುಂದೆ ಬದುಕು ಹೇಗೆಂಬ ಪ್ರಶ್ನೆ ಬೃಹದಕಾರವಾಗಿ ಅವಳನ್ನು ಕಾಡತೊಡಗಿತ್ತು. ಜಲಜಾಳ ಅಪ್ಪ ಒಂದು ಸಲ ಅವಳನ್ನು ನೋಡಲು ಬಂದಿದ್ದವರು, ’ನೀನಲ್ಲಿಗೆ ಬಂದುಬಿಡು ಮಗಾ, ಇಲ್ಲಿ ಯಾಕಿರ್ತೀಯಾ, ಹೆತ್ತ ನಮಗೆ ನೀನೇನು ಹೊರೆ ಯಾಗುತ್ತಿಯಾ’ ಎಂದು ಪ್ರಶ್ನಿಸಿದ್ದರು. ಅವಳಿಗೂ ಹೋಗಿ ಬಿಡಲೇ ಎನಿಸಿತ್ತು. ಆದರೆ ಅತ್ತಿಗೆಯ ನೆನಪಾಗಿ ಮನಸ್ಸು ಹಿಂದೆಕ್ಕೆಳೆಯಿತು.ಅಣ್ಣ ಎಳವೆಯಲ್ಲಿ ತುಂಬಾ ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಿದ್ದ.  ಅವನಿಗೆ ಮದುವೆಯಾಗುವವರೆಗೂ ಸಮಸ್ಯೆಯೇನು ಬಂದಿರಲಿಲ್ಲ. ಅತ್ತಿಗೆ ಬಂದಿದ್ದೇ ಶುರುವಾಯಿತು. ಮನೆಯ ಪ್ರಶಾಂತ ವಾತಾವರಣವೇ ಕದಡಿಹೋಯಿತು.’ಈ ಮುದುಕರದ್ದು ಮಾತ್ರವಲ್ಲದೆ ನಿಮ್ಮ ತಂಗಿಯ ಸೇವೆಯನ್ನು ನಾನು ಮಾಡಬೇಕು. ನಾನೇನು ಕೆಲಸದವಳಾ? ಈ ಭಾಗ್ಯಕ್ಕೆ ನನ್ನನ್ನು ಯಾಕೆ ಕಟ್ಟಿಕೊಂಡಿರಿ?’ಎಂದು ದೊಡ್ಡ ಸ್ವರದಲ್ಲಿ ಆಗಾಗ ಹೇಳುವುದು. ಅಣ್ಣ ಗದರಿದರೆ ’ ಸೊರ್ ಸೊರ್’ ಸದ್ದು ಹೊರಡಿಸಿವುದು ಕೇಳಿ ಕೇಳಿ ಜಲಜಾಳಿಗೆ ಸಾಕಾಗಿ ಹೋಗಿತ್ತು. ಯಾರು ಬಂದರೂ ಒಪ್ಪಿಕೊಳ್ಳುವ ಹಂತಕ್ಕೆ ಅವಳು ಮುಟ್ಟಿದ್ದಳು. ಆ ಕಾಲಕ್ಕೆ ಸರಿಯಾಗಿ ಮೋನಪ್ಪ ಬಂದಿದ್ದ. ಅವನ ಕೈಕಾಲುಗಳು ಕಡ್ಡಿಗಳಂತಿದ್ದವು. ಮುಖ ಹೆಚ್ಚು ಕಡಿಮೆ ಆದಿಮಾನವನನ್ನು ಹೋಲುತ್ತಿತ್ತು. ಈಗ ಬಂದದ್ದು ಬಿಟ್ಟರೆ ಮುಂದೆ ಪಶ್ಚಾತ್ತಾಪ ಪಡಬೇಕಾದಿತು. ಎಲ್ಲಕ್ಕಿಂತ ಹೆಚ್ಚಾಗಿ ಅತ್ತಿಗೆಯ ಪಿರಿಪಿರಿಯಿಂದ ದೂರಾಗಲು ಇರುವ ಏಕೈಕ ದಾರಿ ಇದೊಂದೇ ಎಂದು ಅವಳ ಮನಸ್ಸು ಹೇಳಿದ್ದಕ್ಕೆ ಅವಳು ಅವನನ್ನು ಒಪ್ಪಿಕೊಂಡಿದ್ದಳು. ಅಪ್ಪ ಅಣ್ಣನಿಗೆ ಮನಸ್ಸೇ ಇರಲಿಲ್ಲ. ಅತ್ತಿಗೆ, ’ಅವಳಿಗೇ ಒಪ್ಪಿಗೆಯಾದ ಮೆಲೆ ನಿಮ್ಮದೇನು?” ಎಂದು ಆಕ್ಷೇಪಿಸಿದ್ದಳು. ಕೊನೆಗೂ ಜಲಜಾ ಮೋನಪ್ಪನ ಮಡದಿಯಾಗಿ ಆ ಮನೆಯನ್ನು ತುಂಬಿದ್ದಳು. ಮೋನಪ್ಪ ನೋಡಲು ಹೇಗಿದ್ದರೂ ಅವನಲ್ಲಿ ಪ್ರೀತಿಗೆ ಬರವಿರಲಿಲ್ಲ , ಮೋನಪ್ಪನಿಗೆ ಅಪ್ಪ-ಅಮ್ಮ ಇರಲಿಲ್ಲ. ಇರುವ ಒಬ್ಬ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದ. ಹಾಗಾಗಿ ಮನೆಯಲ್ಲಿ ಇವರಿಬ್ಬರೇ. ಜಲಜಾಳ ಮೇಲೆ ಪ್ರೀತಿಯ ಧಾರೆಯನ್ನೇ ಎರೆದಿದ್ದ. ವೈವಾಹಿಕ ಜೀವನ ಇಷ್ಟೊಂದು ಚೆನ್ನಾಗಿರುತ್ತದೆಂದು ಅವಳಿಗೆ ಅರಿವಾದದ್ದೇ ಆಗ. ಅಂತಹ ಪತಿರಾಯ ಒಂದು ದಿನ ಬೆಳಿಗ್ಗೆಯೇ ಹಾಕಿದ್ದ. ತೆಂಗನ್ನು ಹತ್ತುವಾಗ ಅದ್ಯಾವ ಲಹರಿಯಲ್ಲಿದ್ದನೋ, ಜಾರಿ ಬಿದ್ದಿದ್ದ. ಅಲ್ಲಿಗೆ ತನ್ನ ಬಾಳೆ ಕಮರಿ ಹೋಯಿತೆಂದು ಅವಳು ಕಂಗಾಲಾಗಿದ್ದಳು. ಒಂದುದಿನ ಪಂಚಾಯಿತಿ ಸದಸ್ಯ ತಿಮ್ಮಣ್ಣ ಅವಳ ಮನೆಗೆ ಬಂದಿದ್ದ. ಅದು-ಇದು ಪ್ರಸ್ತಾಪ ಮಾಡಿ, `ಎಷ್ಟು ದಿನಾಂತ ಹೀಗಿರ್ತೀಯಾ ಜಲಜಕ್ಕ. ಪಂಚಾಯಿತ್ ನಲ್ಲಿ ಏನಾದರೂ ನಿನಗೆ ಕೆಲಸ ಕೊಡಿಸಲು ಯತ್ನಿಸುತ್ತೇನೆ. ಅದಕ್ಕೆ ನಿನ್ನ ಸಹಕಾರ ಅಗತ್ಯ’ ಎಂದ. ಅವಳು ಅರ್ಥವಾಗದೇ ಕಣ್ಣು ಪಿಳಿಪಿಳಿ ಬಿಟ್ಟಾಗ ಹತ್ತಿರಬಂದು, ’ಏನು ಜಲಜಕ್ಕ ಮದುವೆಯಾದವಳು ನೀವು, ನಿನಗೆ ನಾನು ಬಿಡಿಸಿ ಹೇಳಬೇಕಾ? ನಾಳೆದಿನ ಹೆಚ್ಚು ಕಡಿಮೆಯಾದರೂ ಅದು ಮೋನಪ್ಪನದೇ ಎಂದು ಜನ ಆಡಿಕೊಳ್ಳುತ್ತಾರೆ. ನೀನ್ಯಾಕೆ ಹೆದರಬೇಕು’ ಅಂದಿದ್ದ. ಜಲಜಾಳಿಗೆ ಅವನ ಬಗ್ಗೆ ಅಸಹ್ಯ ಹುಟ್ಟಿತು. ಅವನು ಕೇಳಿದ್ದಕ್ಕಲ್ಲ. ಹೆಣ್ಣೊಬ್ಬಳು ಸೋತಾಗ ಅವಳನ್ನು ದುರುಪಯೋಗಪಡಿಸಬಹುದೆಂದು ಅವನು ಭಾವಿಸಿದನಲ್ಲಾ ಆ ಭಾವನೆಗೆ. ಅವಳು ಕೈ ಮುಗಿದು ಹೇಳಿದಳು. “ನೀವು ಗೌರವಾನ್ವಿತ ಪಂಚಾಯಿತಿ ಸದಸ್ಯರು. ಇನ್ನು ಇಲ್ಲಿಗೆ ಬರಬೇಡಿ, ಬದುಕುವ ದಾರಿ ನನಗೂ ಗೊತ್ತಿದೆ.” ಅವಳಿಗೆ ಸ್ತ್ರೀ ಶಕ್ತಿ ಗುಂಪೊಂದನ್ನು ಪರಿಚಯಿಸಿದ್ದು ಶಾಲಾ ಮೇಸ್ಟ್ರು ಸುಂದರ ಎಂಬುವರು. ಒಂದು ದಿನ ಅವಳನ್ನು ಶಾಲೆಗೆ ಕರೆಸಿ ಅವರು ಹೇಳಿದರು. ’ನೋಡು ಜಲಜ, ಜೀವನ ಮುಗಿಯಿತು ಎಂದು ಭಾವಿಸಿಬೇಡ ನೀನು. ಮನಸ್ಸು ಮಾಡಿದರೆ ಬದುಕಲು ನೂರಾರು ದಾರಿಗಳಿವೆ. ಮಹಿಳಾ ಸಮಾಜದಲ್ಲಿ ಹೊಲಿಗೆ ಕ್ಲಾಸ್ ನಡೆಸುತ್ತಾರೆ. ನೀನು ಸೇರಿಕೋ. ಸ್ವಲ್ಪ ಉಳಿತಾಯ ಮಾಡಿದರೆ ಸ್ತ್ರೀ ಶಕ್ತಿ ಗುಂಪಿನಿಂದ ಒಂದು ಹೊಲಿಗೆ ಮೆಶಿನನನ್ನು ತೆಗೆದುಕೊಳ್ಳಬಹುದು. ಆಗ ನೀನು ಯಾರಿಗೂ ಹೆದರುವ ಅಗತ್ಯವೂ ಇಲ್ಲ.’ ಹಾಗೆ ಬಂದದ್ದು ಈ ಮಿಶನ್ನು. ಆರಂಭದ ದಿವಸಗಳನ್ನು ನೆನಪಿಸಿಕೊಳ್ಳುವಾಗ ಅವಳಿಗೆ ನಗು ಬರುತ್ತಿತ್ತು. ಅಳತೆ ನೋಡುವ ಟೇಪಿನಲ್ಲಿ ಹುಡುಗಿಯರ-ಹೆಂಗಸರ ಬ್ಲೌಸ್ ಗೆ ಅಳತೆ ತೆಗೆದುಕೊಳ್ಳುವಾಗ ತನ್ನ ಬಾಲ್ಯ, ಯೌವನದ ನೆನಪಾಗುತ್ತಿತ್ತು. ಅವಳು ಊರಿನ ದರ್ಜಿಯ ಬಳಿ ಲಂಗ-ಬ್ಲೌಸ್ ಹೊಲಿಸಲೆಂದು ಹೋದಾಗ ಅವನು ಅಳತೆ ತೆಗೆಯಲು ಅಗತ್ಯಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ. ಆಗೆಲ್ಲಾ ಏನೋ ನಾಚಿಕೆ. ಜೊತೆಗೆ ರೋಮಾಂಚನ. ಆ ಪ್ರಾಯವೇ ಹಾಗಿತ್ತು. ಈಗ ತಾನು ಹೆಂಗಸರ ಲಂಗ ಬ್ಲೌಸ್ ಹೊಲಿಯುತ್ತಿದ್ದೇನೆ. ತಾನು ಅಳತೆ ತೆಗೆದುಕೊಳ್ಳುವುದು ಇವರಲ್ಲಿ ರೋಮಾಂಚನ ಮೂಡಲಾರದು ಎಂದುಕೊಂಡು ಅವಳು ತುಟಿಯಂಚಿನಲ್ಲಿ ನಗುತ್ತಿದ್ದಳು. ಅಂದು ಸಂಜೆ ಶಾಲಾ ಮಾಸ್ತರರು ಅವಳಲ್ಲಿಗೆ ಬಂದಾಗ ಅವಳಿಗೆ ಅಚ್ಚರಿ. ಅವಳಿಗೆ ಗಂಡಸರ ಡ್ರೆಸ್ ಹೊಲಿಯಲು ಗೊತ್ತಿರಲಿಲ್ಲ. ಯಾಕೆ ಬಂದರು ಇವರು? ಅವಳು ಗಡಬಡಿಸಿ ಎದ್ದು ನಮಸ್ಕರಿಸಿ,’ಬನ್ನಿ ಮಾಸ್ಟ್ರೇ, ಯಾಕೆ ಬಂದಿರಿ ಎಂದೇ ಗೊತ್ತಾಗಲಿಲ್ಲ.’ ಎಂದಳು. ಮೇಸ್ಟ್ರು ಎದುರಿದ್ದ ಸ್ಟೂಲ್ ನಲ್ಲಿ ಕುಳಿತರು. ’ಏನಿಲ್ಲ ಜಲಜ, ಹೇಗಿದೆ ನಿನ್ನ ಕೆಲಸ ಎಂದು ನೋಡಿಕೊಂಡು ಹೋಗೋಣಾಂತ ಬಂದೆ.’ ಅವಳು ನಕ್ಕಳು.’ಎಲ್ಲಾ ನಿಮ್ಮ ಆಶೀರ್ವಾದ ಸರ್, ನೀವು ಹೇಳಿದ್ದಕ್ಕೆ ಹೊಲಿಗೆ ಕಲಿತೆ. ಈಗ ಮೆಶಿನ್ನೂ ಬಂದಿದೆ. ಸಾಲ ಪೂರ್ತಿ ತೀರಿಸಿದ್ದೇನೆ. ಸ್ವಲ್ಪ ಉಳಿತಾಯವೂ ಇದೆ. ನೆಮ್ಮದಿಯಾಗೇ ಇದ್ದೇನೆ.’ಅಂದಳು. ಮೇಸ್ಟ್ರು ಅದೂ-ಇದೂ ಮಾತನಾಡಿ ವಿಷಯಕ್ಕೆ ಬಂದರು.’ನಾನೊಂದು ಮಾತು ನಿನಗೆ ಹೇಳಬೇಕು ಜಲಜಾ. ಆದರೆ ಅದು ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೂ ತಿಳಿಯಲೇಬಾರದು. ನಿನಗೆ ಈ ಮಾತು ಇಷ್ಟವಾಗದಿದ್ದರೆ ನೇರವಾಗಿ ಹೇಳಿಬಿಡು. ನನಗೇನೂ ಬೇಸರವಿಲ್ಲ.’ ಎಂದರು. ಜಲಜ ಆಶ್ಚರ್ಯದಿಂದ ಅವರ ಮುಖವನ್ನೇ ನೋಡುತೊಡಗಿದಳು. `ನಿನಗೆ ಗೊತ್ತಲ್ವ ಜಲಜ, ಮಗಳು ಶ್ವೇತಾ ತುಂಬ ಹಠ ಮಾಡುತ್ತಿದ್ದಾಳೆ. ತಾಯಿ ಇಲ್ಲದ ಮಗು ತಾನೇ? ಈ ಶಾಲೆಯ ಕೆಲಸ, ಗಣತಿ ಕೆಲಸ, ಬಿಸಿಯೂಟದೆ ತಯಾರಿ, ಚುನಾವಣೇ ಎಂದು ಅವಳನ್ನು ಗಮನಿಸಲು ಸಮಯವೇ ಸಿಗುತ್ತಿಲ್ಲ. ನೇರವಾಗಿ ಕೇಳುವುದಕ್ಕೆ ಕ್ಷಮಿಸು. ನೀನು ಒಪ್ಪಿದರೆ ಅವಳಿಗೆ ತಾಯಿ ಸಿಕ್ಕಂತಾಗುತ್ತದೆ.’ ಜಲಜಾಳ ಮೈ ಒಮ್ಮೆ ಥರಗುಟ್ಟಿತು. ನಾಚಿಕೆಯಿಂದ ಕೆನ್ನೆಗಳಲ್ಲಿ ರಂಗು ಸುಳಿಯುತು. ಅವಳು ತಲೆ ತಗ್ಗಿಸಿ ಹೇಳಿದಳು,’ ಈಕ್ಷಣಕ್ಕೆ ಹೇಗೆ ಉತ್ತರಿಸಲಿ ಮೇಸ್ಟ್ರೆ, ನಾಳೆ ಉತ್ತರಿಸುತ್ತೇನೆ.” ಮೇಸ್ಟ್ರು ನಕ್ಕರು. ’ಸ್ಪಷ್ಟವಾಗಿ ಹೇಳುತ್ತೇನೆ ಜಲಜ. ನಾನು ನೇರ ಮನುಷ್ಯ. ನಿನಗೆ ಒಪ್ಪಿಗೆಯಿಲ್ಲದಿದ್ದರೆ ಏನೊ ಬೇಸರವಿಲ್ಲ. ಶ್ವೇತಾಳಿಗೆ ತಾಯಿ ಬೇಕೆಂದೇ ನಿನ್ನನ್ನು ನಾನು ಕೇಳುತ್ತಿರುವುದಲ್ಲ. ನನಗೂ ಒಬ್ಬಳು ಜೊತೆಗಾತಿ ಬೇಕು ಎನಿಸಿದೆ. ಮನಸ್ಸಿಗೆ ಇಷ್ಟವಾದ ಹೆಣ್ಣು ಕೊಡಬಹುದಾದ ಸಮಾಧಾನ ಬೇರೆ ಯಾರಿಂದಲೂ ಸಿಗಲಾರದು.’ ಎಂದು ಹೇಳುತ್ತಾ ಎದ್ದು ಹೊರಗೆ ಕಾಲಿಟ್ಟರು. ಅವರು ಹೊರಗೆ ಬರುತ್ತಿರುವಂತೆ ಜಲಜ ಮೃದುವಾಗಿ ಹೇಳುತ್ತಿರುವುದು ಅವರ ಕಿವಿಗೆ ಬಿತ್ತು. ’ನಾನು ಒಪ್ಪಿದ್ದೇನೆ.’ ಮೇಸ್ಟ್ರು ತಿರುಗಿ  ನೋಡಿದರು. ಜಲಜಾಳ ಕಣ್ಣುಗಳಲ್ಲಿ ಸಾವಿರ ಕ್ಯಾಂಡಲ್ಲಿನ ದೀಪ ಉರಿಯುತ್ತಿರುವಂತೆ ಅವರಿಗೆ ಭಾಸವಾಯಿತು! *****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ ಹಗಲು ಎರಡೂನು
Next post ನಾವು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys